ಮಂಗಳೂರು ಲಕ ಸುದ್ದಿ: ದಕ್ಷಿಣ ಕನ್ನಡ ಜಿಲ್ಲೆಯು ವಿವಿಧ ಹಬ್ಬಗಳಿಗೆ ಸಂಪ್ರದಾಯಗಳಿಗೆ ಜನಪ್ರಿಯವಾದ ಜಿಲ್ಲೆ. ವಿವಿಧ ಧರ್ಮಗಳ ಜನರು ವಾಸಿಸುವ ದಕ್ಷಿಣ ಕನ್ನಡ ಜಿಲ್ಲೆಯ ಜನರು ತಮ್ಮದೇ ಆದ ಸಾಂಸ್ಕೃತಿಕ ಹಬ್ಬಗಳನ್ನು ಆಚರಿಸುತ್ತಾರೆ. ಅದರಲ್ಲಿಯೂ ಕರಾವಳಿ ಜಿಲ್ಲೆಗಳಲ್ಲಿ ಹಿಂದೂ ಮತ್ತು ಕ್ರೈಸ್ತ ಸಮುದಾಯದವರು ವಿಶೇಷವಾಗಿ ಆಚರಿಸುವ ಪ್ರಕೃತಿಯನ್ನು ಗೌರವಿಸುವ ಹಬ್ಬ ತೆನೆಹಬ್ಬ. ಈ ತೆನೆಹಬ್ಬವನ್ನು ಕ್ರೈಸ್ತರು ಸೆಪ್ಟೆಂಬರ್ 8 ರಂದು ಮೋಂತಿ ಹಬ್ಬವಾಗಿ ಆಚರಿಸುತ್ತಾರೆ. ಅವರು ಚರ್ಚುಗಳಿಂದ ತೆನೆಯನ್ನು ಸಂಗ್ರಹಿಸುತ್ತಾರೆ. ಅದೇ ರೀತಿ ಹಿಂದೂ ಧರ್ಮೀಯರು ಗಣೇಶ ಚತುರ್ಥಿಯಂದು ಹಿಂದೂ ದೇವಸ್ಥಾನ ಗಳಲ್ಲಿ ಪ್ರಸಾದ ರೂಪದಲ್ಲಿ ತೆನೆಯನ್ನು ಸಂಗ್ರಹಿಸಿ ತೆನೆಯನ್ನು ದೇವರ ಮುಂದೆ ಪೂಜೆ ಮಾಡಿ ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ಹೊಸ ಅಕ್ಕಿ ಊಟ ಮಾಡುವುದು ವಾಡಿಕೆ. ಈ ಹಬ್ಬದ ಸಮಯದಲ್ಲಿ ಎಲ್ಲಾ ದೇವಸ್ಥಾನದಲ್ಲೂ ಹೊಸತೆನೆಗೆ ಎಲ್ಲಿಲ್ಲದ ಬೇಡಿಕೆ ಇದೆ. ಇಲ್ಲಿನ ವಿಶೇಷತೆ ದಕ್ಷಿಣ ಕನ್ನಡದ ಎಲ್ಲಾ ಹೆಚ್ಚಿನ ಹಿಂದೂ ದೇವಸ್ಥಾನ ಹಾಗೂ ಚರ್ಚುಗಳಿಗೂ ಈ ತೆನೆಯನ್ನು ಪೂರೈಸುತ್ತಿರುವವರು ಮಂಗಳೂರು ಜಪ್ಪಿನ ಮೊಗರು ಕಡೆಕಾರು ನಿವಾಸಿ ಶ್ರೀ ಹರ್ಬರ್ಟ್ ಡಿ ಸೋಜಾರವರು.ಇಂದಿನ ದಿನಗಳಲ್ಲಿ ಆಧುನಿಕ ಕಾಲದ ತಂತ್ರಜ್ಞಾನದ ಯುಗದಲ್ಲಿ ಮಂಗಳೂರು ನಗರದಲ್ಲಿ ಭತ್ತದ ಗದ್ದೆಗಳು ಮಾಯವಾಗಿರುವ ಈ ಕಾಲದಲ್ಲಿ ಕೂಡ ಇವರು ಹಲವಾರು ವರುಷಗಳಿಂದ ತಮ್ಮ ಹೊಲದಲ್ಲಿ ತೆನೆಹಬ್ಬಕ್ಕೆಂದೇ ವಿಶೇಷವಾಗಿ ಪೈರುಗಳನ್ನು ಬೆಳೆಸುತ್ತಿದ್ದಾರೆ. ದೈವಿಕ ಕೆಲಸಕ್ಕೆ ಪೂರೈಸುವ ಪೈರು ಬೆಳೆಯುವ ಹೊಲಕ್ಕೆ ಯಾವುದೇ ಪ್ರಾಣಿ ಅಥವಾ ಮನುಷ್ಯರ ಪ್ರವೇಶಕ್ಕೆ ಅನುವು ಮಾಡಿಕೊಡದೆ ಗದ್ದೆಗೆ ಸುತ್ತಲೂ ಬೇಲಿ ಹಾಕಿ ನೈಸರ್ಗಿಕ ಹಾಗೂ ಪರಿಶುದ್ಧವಾಗಿ ಪೈರನ್ನು ಬೆಳೆಸಿ ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ದೇವಸ್ಥಾನಗಳಿಗೆ ಚರ್ಚುಗಳಿಗೆ ಈ ಪೈರನ್ನು ಪೂರೈಸುತ್ತಿದ್ದಾರೆ.*
*ಜಾತಿ ಮತ ಧರ್ಮಕ್ಕಾಗಿ ಹೊಡೆದಾಡುವ ಈ ಕಾಲದಲ್ಲಿ ಹರ್ಬರ್ಟ್ ಡಿ ಸೋಜಾರಂತವರು ಜಾತ್ಯಾತೀತ ಮನೋಭಾವನೆಯಿಂದ ತೆನೆಹಬ್ಬಕ್ಕಾಗಿ ಪೈರನ್ನು ಬೆಳೆಸಿ ಎಲ್ಲಾ ಧರ್ಮದವರಿಗೂ ತೆನೆ ಪೈರನ್ನು ಉಚಿತವಾಗಿ ಪೂರೈಸುವ ಮುಖಾಂತರ ಧಾರ್ಮಿಕ ಸಾಮರಸ್ಯವನ್ನು ಕಾಪಾಡುವಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಿರುವುದು ನಿಜವಾಗಿಯೂ ಶ್ಲಾಘನೀಯ.*
No comments:
Post a Comment