ಕೊರೋನದ ಸಂಕಷ್ಟದ ದಿನಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಭಕ್ತರ ಸಂಕಷ್ಟಕ್ಕೆ ನೆರವಾಯಿತು ಕುದ್ರೋಳಿ ಗೋಕರ್ಣನಾಥ ಕ್ಷೇತ್ರ !!
ದೇವರ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ದೇವಸ್ಥಾನಕ್ಕೆ ಹತ್ತೂರ ಭಕ್ತರು ಅಕ್ಕಿ , ಫಲ ಪುಷ್ಪಗಳನ್ನು ಹೊರೆಕಾಣಿಕೆಯಾಗಿ ಅರ್ಪಿಸುವುದನ್ನು ನೋಡಿದ್ದೇವೆ . ಆದರೆ ಅದೇ ಭಕ್ತರ ಪಾಲಿಗೆ ಕಷ್ಟದ ದಿನಗಳು ಬಂದಾಗ ದೇವರು ಹಾಗೂ ದೇವಸ್ಥಾನ ಸ್ಪಂದಿಸಬೇಕಲ್ಲವೇ ? ಹಾಗೆಯೇ , ದೇವರ ಸೇವೆ ದೇವಸ್ಥಾನದ ಗರ್ಭಗುಡಿಗೆ ಸೀಮಿತವಾಗಬಾರದು, ಬದಲಾಗಿ ಸಂಕಷ್ಟದಲ್ಲಿರುವವರಿಗೆ ನೆರವಾದಾಗ ದೇವರ ಸಾನಿಧ್ಯ ವನ್ನು ಅನುಭವಿಸಲು ಸಾಧ್ಯ. ಹೀಗೆ ಭಕ್ತರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಬೇಕು ಎನ್ನುವ ಸದುದ್ದೇಶದಿಂದಲೇ ಮಂಗಳೂರಿನ ಶ್ರೀ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರ ನಿತ್ಯವೂ ಸುಮಾರು 1000 ಜನರಿಗೆ ದೇವಸ್ಥಾನದ ಸೇವಾದಳದ ಮೂಲಕ ಊಟವನ್ನು ವಾಹನದಲ್ಲಿ ಸಾಗಿಸಿ ವಿತರಿಸುತ್ತಿದೆ.
ಹನಿ ಹನಿ ಕೂಡಿ ಹಳ್ಳವೆಂಬಂತೆ , ತಾನು ಪ್ರಸಾದದ ರೂಪದಲ್ಲಿ ನೂರಾರು ಸಂಘ ಸಂಸ್ಥೆಗಳಿಗೆ ಅಕ್ಕಿಯನ್ನು ವಿತರಿಸುವುದರ ಮೂಲಕ ಸಹಾಯ ನೀಡುತ್ತಿದೆ. ಎಲ್ಲಾ ನದಿಗಳು ಕೂಡ ಹರಿದು ಕೊನೆಗೆ ಸಮುದ್ರವನ್ನೇ ಸೇರುವಂತೆ, ಪ್ರತಿಯೊಂದು ಸಂಘ ಸಂಸ್ಥೆಯೂ ಕೂಡ ತಾನು ಕ್ಷೇತ್ರದಿಂದ ಪ್ರೇರಣೆಯಾಗಿ ಪಡೆದ ಅಕ್ಕಿಯ ತೂಕಕ್ಕೆ , ಐದು ಪಟ್ಟು ಅಕ್ಕಿಯನ್ನು ತನ್ನ ವತಿಯಿಂದ ಸೇರಿಸುವುದರ ಮೂಲಕ ಕ್ಷೇತ್ರದ ಈ ಕಾರ್ಯವನ್ನು ಮತ್ತಷ್ಟು ಸಾರ್ಥಕ್ಯ ಗೊಳಿಸುತ್ತಿದೆ. ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರ ಆಶಾಯ ಹಾಗೂ ಸೂಚನೆಯಂತೆ ಸುಮಾರು 220 ಕ್ವಿoಟಲ್ ನಷ್ಟು ಅಕ್ಕಿಯನ್ನು ಸಂಕಷ್ಟದಲ್ಲಿರುವವರಿಗೆ ಹಂಚುವ ಮೂಲಕ , ದೇವಸ್ಥಾನ ಭಕ್ತರಿಗೆ ಮತ್ತಷ್ಟು ಹತ್ತಿರವಾಗಿದೆ . ಇದನ್ನು ಸಹಾಯ ಹಸ್ತ ಕೇಳಿಬರುತ್ತಿರುವ ಹಾಗೂ ಸಮಾಜ ಸೇವೆಯಲ್ಲಿ ಈಗಾಗಲೇ ತೊಡಗಿರುವ ಸಂಘ ಸಂಸ್ಥೆಗಳಿಗೆ , ಖರೀದಿಸಿದ ಅಕ್ಕಿಯ ತತ್ಸಮಾನ ಹಣವನ್ನು ಜಮೆ ಮಾಡುವುದರ ಮೂಲಕ ಈ ಕಾರ್ಯವನ್ನು ಸಾದಿಸುತ್ತಿದೆ. ಜಿಲ್ಲೆಯ ಉದ್ದಗಲದಿಂದ ಬೇಡಿಕೆ ಬರುತ್ತಿರುವುದರಿಂದ ಇಂತಹ ಸಮಾಜಮುಖಿ ಕಾರ್ಯವನ್ನು ಲಾಕ್ ಡೌನ್ ಇರುವ ಸಂಪೂರ್ಣ ಅವಧಿಗೂ ವಿಸ್ತರಿಸಲೂ ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ.
ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯಸಿ