21 Oct 2020

ಸಿಗಂದೂರು ವಿವಾದ ಸುಖಾಂತ್ಯನ್ಯಾಯಾಲಯದ ಮಧ್ಯಸ್ತಿಕೆಯಲ್ಲಿ ಆಡಳಿತಮಂಡಳಿ-ಅರ್ಚಕರ ನಡುವೆ ರಾಜಿ .....

ಮಂಗಳೂರು ಲಕ ಸುದ್ದಿ:ಸಿಗಂದೂರು ವಿವಾದ ಸುಖಾಂತ್ಯ
ನ್ಯಾಯಾಲಯದ ಮಧ್ಯಸ್ತಿಕೆಯಲ್ಲಿ ಆಡಳಿತಮಂಡಳಿ-ಅರ್ಚಕರ ನಡುವೆ ರಾಜಿ

ಶಿವಮೊಗ್ಗ,ಅ.೨೧: ಸಿಗಂದೂರು ಕ್ಷೇತ್ರದಲ್ಲಿ ಅರ್ಚಕರು ಹಾಗೂ ಧರ್ಮದರ್ಶಿಗಳ ನಡುವೆ ಉಂಟಾಗಿದ್ದ ವಿವಾದ ಸ್ಥಳೀಯ ಸಿವಿಲ್ ನ್ಯಾಯಾಲಯದ ಮಧ್ಯಸ್ಥಿಕೆಯಲ್ಲಿ  ಇತ್ಯರ್ಥಗೊಂಡಿದ್ದು ಸುಖಾಂತ್ಯಗೊಂಡಿದೆ.
 ದೇಗುಲದ ಭಕ್ತರಾದ ಸಂದೀಪ್ ಹಾಗೂ ನವೀನ್ ಜೈನ್ ಎಂಬುವವರು ದೇವಸ್ಥಾನದ ಪೂಜಾ ವಿಧಿವಿಧಾನಗಳಿಗೆ ಆಡಳಿತ ಮಂಡಳಿಯಿಂದ ಯಾವುದೇ ಅಡ್ಡಿಯಾಗದಂತೆ ನಿರ್ಬಂಧಕಾಜ್ಞೆ ನೀಡಬೇಕೆಂದು ಇಲ್ಲಿನ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.  
ಕೊರೊನ ಕಾರಣಕ್ಕೆ ನವರಾತ್ರಿ ಸಂದರ್ಭ ಚಂಡಿಕಾಯಾಗ ಮಾಡಲು ಆಡಳಿತ ಮಂಡಳಿ ನಿರಾಕರಿಸಿದ್ದರಿಂದ ಅರ್ಚಕರ ಬೆಂಬಲಿಗರು ದಾವೆ ಹೂಡಿದ್ದು, ಧರ್ಮದರ್ಶಿ ಡಾ.ರಾಮಪ್ಪ ಹಾಗೂ ಅವರ ಪುತ್ರ ರವಿಕುಮಾರ್,ಶೇಷಗಿರಿ ಭಟ್ ಅವರನ್ನು ಪಾರ್ಟಿ ಮಾಡಿದ್ದರು. ಪ್ರಕರಣದ ವಿಚಾರಣೆ ಮಂಗಳವಾರವೂ ನಡೆದಿತ್ತು
ಬುಧವಾರ ಮುಂದುವರಿದ ವಿಚಾರಣೆ ಸಂದರ್ಭ ದಾವೆ ಹೂಡಿದ್ದ ಪಕ್ಷಗಾರರು, ಧರ್ಮದರ್ಶಿ ರಾಮಪ್ಪ, ರವಿಕುಮಾರ್ ಹಾಗೂ ಶೇಷಗಿರಿಭಟ್ ಅವರನ್ನು ನ್ಯಾಯಾಲಯಕ್ಕೆ ಕರೆಸಿಕೊಂಡ ನ್ಯಾಯಾಧೀಶರಾದ ಫೆಲಿಕ್ಸ್ ಆಲ್ಫಾನ್ಸೊ ಅಂತೋನಿ ಅವರು ಮಧ್ಯಸ್ಥಗಾರಿಕೆ ಮೂಲಕ ವಿವಾದ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿದರು. ಉಭಯ ಪಕ್ಷಗಾರರ ವಕೀಲರು ಹಾಗೂ ನ್ಯಾಯಾಲಯ ನೇಮಿಸಿದ್ದ ಮಧ್ಯಸ್ಥಿಕೆಗಾರರ ಉಪಸ್ಥಿತಿಯಲ್ಲಿ ನಡೆದ ಮಾತುಕತೆಯಲ್ಲಿ ವಿವಾದವನ್ನು ರಾಜೀಮೂಲಕ ಇತ್ಯರ್ಥಪಡಿಸಿಕೊಳ್ಳಲು ತೀರ್ಮಾನಿಸಲಾಯಿತು.
ಕೋವಿಡ್-೧೯ ಇರುವ ಈ ಕಾಲದಲ್ಲಿ ದೇವಸ್ಥಾನದ ಗರ್ಭಗುಡಿಯ ಮುಂಭಾಗದಲ್ಲಿ ಏಕಕಾಲಕ್ಕೆ ೪೦ ಜನರನ್ನು ಮಾತ್ರ ಸೇರಿಸಬೇಕು. ಭಕ್ತರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂಬ ಅಂಶಕ್ಕೆ ಧರ್ಮದರ್ಶಿ ರಾಮಪ್ಪ, ರವಿಕುಮಾರ್ ಹಾಗೂ ಶೇಷಗಿರಿಭಟ್ ಸಮ್ಮತಿ ಸೂಚಿಸಿದ್ದಾರೆ. ಪೂಜೆಯ ನಂತರ ಮಂಗಳಾರತಿ ತಟ್ಟೆಯನ್ನು ಅರ್ಚಕರು ಭಕ್ತರ ಬಳಿ ಕೊಂಡೊಯ್ಯುವಂತಿಲ್ಲ. ನಿರ್ದಿಷ್ಟ ಜಾಗದಲ್ಲಿ ಇಟ್ಟು ಭಕ್ತರಿಗೆ ನಮಸ್ಕರಿಸಲು ಅವಕಾಶ ನೀಡಬೇಕು. ದಸರಾ ಅಂಗವಾಗಿ ಶೇಷಗಿರಿ ಭಟ್ ಕುಟುಂಬ ಚಂಡಿಕಾಹೋಮವನ್ನು ಧರ್ಮದರ್ಶಿ ರಾಮಪ್ಪ ,ರವಿಕುಮಾರ್ ಕುಟುಂಬದವರ ಉಪಸ್ಥಿತಿಯಲ್ಲಿ ನೆರವೇರಿಸಬೇಕು ಎಂಬ ಅಂಶಕ್ಕೆ ಉಭಯ ಪಕ್ಷಗಾರರು ಒಪ್ಪಿಗೆ ಸೂಚಿಸಿದ್ದಾರೆ.
ದೇವಾಲಯಕ್ಕೆ ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಸರಕಾರದ ಮಾರ್ಗಸೂಚಿಯನ್ವಯ ಅವಕಾಶ ನೀಡಬೇಕು. ಕೋವಿಡ್ ಪಿಡುಗಿನ ನಂತರ ಧರ್ಮದರ್ಶಿ ರಾಮಪ್ಪ, ರವಿಕುಮಾರ್ ಹಾಗೂ ಶೇಷಗಿರಿ ಭಟ್ ಅವರು ಪರಸ್ಪರ ಹೊಂದಾಣಿಕೆ ಮೂಲಕ ಪೂಜೆ ಮತ್ತಿತರ ಚಟುವಟಿಕೆ ಮುಂದುವರಿಸಿಕೊಂಡು ಹೋಗಲು ಮಧ್ಯಸ್ತಿಕೆಗಾರರ ಸಮ್ಮುಖದಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಮಾತುಕತೆ ಬಳಿಕ ಉಭಯ ಪಕ್ಷಗಾರರ ಒಪ್ಪಿಗೆಯ ಮೇರೆಗೆ ದಾವೆಯನ್ನು ಹಿಂದೆ ಪಡೆಯಲಾಯಿತು. ದಾವೆದಾರರ ಪರವಾಗಿ ವಕೀಲರಾದ ರವೀಶ್ ಕುಮಾರ್, ಪ್ರತಿವಾದಿಗಳಾದ ರಾಮಪ್ಪ ಮತ್ತು ರವಿಕುಮಾರ್ ಪರವಾಗಿ ಎನ್.ವೆಂಕಟರಾಮ್, ಎಚ್.ಎನ್.ದಿವಾಕರ್, ಬಿ.ನಾಗರಾಜ, ಎಂ.ರಾಘವೇಂದ್ರ, ಕೆ.ಬಿ.ಮಹಾಬಲೇಶ್, ಶೇಷಗಿರಿ ಭಟ್ ಪರವಾಗಿ ಟಿ.ಎಸ್.ರಮಣ ಮಧ್ಯಸ್ಥಿಕೆಗಾರರಾಗಿ ವಕೀಲರಾದ ಮರಿದಾಸ್ ಭಾಗವಹಿಸಿದ್ದರು.

*ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜಯ.ಸಿ.ಸುವರ್ಣ ನಿಧನ*

ಮಂಗಳೂರು ಲಕ ಸುದ್ದಿ:
*ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜಯ.ಸಿ.ಸುವರ್ಣ ನಿಧನ*

*ಪೂಜಾರಿಯವರ ಕುದ್ರೋಳಿ ಕ್ಷೇತ್ರದ ನವೀಕರಣ ಕನಸಿಗೆ ಬೆನ್ನೆಲುಬಾದವರು ಜಯ ಸಿ.ಸುವರ್ಣ*

ಮಂಗಳೂರು: ಬಿಲ್ಲವರ ಮಹಾಮಂಡಲದ ಸ್ಥಾಪಕಾಧ್ಯಕ್ಷ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಭಾರತ್ ಕೋ-ಅಪರೇಟಿವ್ ಬ್ಯಾಂಕ್ ನ ಮಾಜಿ ಅಧ್ಯಕ್ಷ, ಮೂಲ್ಕಿ ಜಯ ಸಿ. ಸುವರ್ಣ (82) ಬುಧವಾರ ಬೆಳಗ್ಗಿನ ಜಾವ ಮುಂಬೈಯಲ್ಲಿ ನಿಧನರಾಗಿದ್ದಾರೆ.

ಮುಂಬೈಯಲ್ಲಿ ಬಿಲ್ಲವರಿಗೆ ಸ್ಫೂರ್ತಿಯಾಗಿ, ಸಮಸ್ತ ಬಿಲ್ಲವ ಸಮಾಜವನ್ನು ಒಂದಾಗಿಸಿ, ಬಿಲ್ಲವ ಸಂಘಟನೆಗಳಿಗೆ ಶಕ್ತಿಯಾಗಿ, ಮುಂಬೈ ಬಿಲ್ಲವ ಭವನದ ರೂವಾರಿಯಾಗಿ, ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬಿಲ್ಲವ ಸಮಾಜದ ಅಭಿವೃದ್ಧಿಗೆ ಹತ್ತು ಹಲವಾರು ಕೊಡುಗೆಗಳನ್ನು ನೀಡಿದವರು. ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರ ಕುದ್ರೋಳಿ ಕ್ಷೇತ್ರದ ನವೀಕರಣದ ಕನಸ್ಸಿಗೆ ಬೆಂಬಲವಾಗಿ ನಿಂತವರು.

ಮುಂಬೈ ಗುಜರಾತ್ ಸೇರಿದಂತೆ ದೇಶ ವಿದೇಶಗಳ ಬಿಲ್ಲವರನ್ನು ಸಂಪರ್ಕಿಸಿ ಆರ್ಥಿಕ ಸಂಪನ್ಮೂಲ ಕ್ರೋಡಿಕರಿಸಿ ಜನಾರ್ದನ ಪೂಜಾರಿಯವರ ಕನಸ್ಸಿನ ಯೋಜನೆ ಶ್ರೀ ಕ್ಷೇತ್ರದ ನವೀಕರಣ ಹಾಗೂ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಮುಂಬೈ ಬಿಲ್ಲವರ ಅಸೋಸಿಯೇಶನ್ ಹಿರಿಯರಿಂದ ಸ್ಪಾಪಿತವಾದ ಭಾರತ್ ಕೋ- ಅಪರೇಟಿವ್ ಬ್ಯಾಂಕಿನ ಚುಕ್ಕಾಣಿ ಹಿಡಿದು ಆಗ ಕೇವಲ 5 ಶಾಖೆಗಳಿದ್ದ ಅದನ್ನು ಜನಾರ್ದನ ಪೂಜಾರಿಯವರ ಬೆಂಬಲದೊಂದಿಗೆ ಇಂದು 100ಕ್ಕೂ ಅಧಿಕ ಶಾಖೆಗಳ ವಿಸ್ತರಣೆಯೊಂದಿಗೆ ಸಮಾಜದ ಸಾವಿರಾರು ಮಂದಿಗೆ ಉದ್ಯೋಗ, ಲಕ್ಷಾಂತರ ಮಂದಿಗೆ ಸಾಲದ ಮೂಲಕ ಆರ್ಥಕ ಶಕ್ತಿ ನೀಡಿ ಅವರ ವ್ಯವಹಾರಕ್ಕೆ ನೆರವಾದ ಜಯ ಸಿ ಸುವರ್ಣರ ಇಚ್ಛಾಶಕ್ತಿಯಿಂದಾಗಿ ಇಂದು ಭಾರತ್ ಕೋ-ಅಪರೇಟಿವ್ ಬ್ಯಾಂಕ್ ದೇಶದ ಪ್ರತಿಷ್ಠಿತ ಬ್ಯಾಂಕ್ ಎಂಬ ಹೆಗ್ಗಳಿಕೆಯೊಂದಿಗೆ ಹಲವಾರು ಪ್ರಶಸ್ತಿ ಗೌರವಗಳಿಗೆ ಪಾತ್ರವಾಗಿದೆ.

ತಿಳಿದು ಬರೋದು ಜನನ.... ತಿಳಿಯದೆ ಬರೋದು ಮರಣ.... ತಿಳಿದು ಬದುಕುವುದೇ ಜೀವನ..ಇವರೇ ಸಾರ್ಥಕ ಬದುಕಿನ ನಮ್ಮ ಜಯ ಸಿ ಸುವರ್ಣ. ಬದುಕಿನುದ್ದಕ್ಕೂ ಜಗತ್ತಿನಲ್ಲಿ ಸ್ರಷ್ಟಿಯಾದ ಎಲ್ಲರನ್ನೂ, ಎಲ್ಲವನ್ನೂ ಪ್ರೀತಿಸುತ್ತಾ, ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಸಂದೇಶ ಗಳನ್ನು ಪಾಲಿಸುತ್ತಾ, ಕೂಡಿ ಬಾಳಿ, ದಾನ ಮಾಡಿ ಮಾಡಿ,  ಕೊಟ್ಟು ಕೊಟ್ಟು ಹಿಗ್ಗದೇ ಸರ್ವ ಸಮಾಜದ ಒಬ್ಬ ಮಹಾನ್ ಜನನಾಯಕರಾಗಿದ್ದರು.

ಗೋರೆಗಾವ್‌‌ನ ಜಯಪ್ರಕಾಶ್ ಹೋಟೆಲ್ ಮಾಲೀಕ, ಭಾರತ್ ಬ್ಯಾಂಕ್ ನ ಅಭಿವೃದ್ಧಿ ರೂವಾರಿ,  ಮಾಜಿ ಕಾರ್ಯಾಧ್ಯಕ್ಷರು, ಬಿಲ್ಲವರ ಅಸೋಸಿಯೇಷನ್ ಮುಂಬೈ ಇದರ ಮಾಜಿ ಅಧ್ಯಕ್ಷರು, ಮಾರ್ಗ ದರ್ಶಕರು,ಬಿಲ್ಲವರ ಮಹಾ ಮಂಡಲದ ಮಾಜಿ ಅಧ್ಯಕ್ಷರು, ಕುದ್ರೋಳಿ ಗೋಕರ್ಣ ಕ್ಷೇತ್ರದ ಅಭಿವೃದ್ಧಿಯ ಹರಿಕಾರ  ಹಾಗೇನೇ ಸಾಯಿ ವೆಜ್ ಹೋಟೆಲ್ ಗ್ರೂಪ್ನ ಸ್ಥಾಪಕರು ಆದ ಸಂಘಟಕರಾಗಿದ್ದ ಅವರು ನಮ್ಮ ನಿಮ್ಮ ಜನನಾಯಕರಾಗಿದ್ದರು. ಮೃತರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಎಂದು ಈ ಮೂಲಕ ಪ್ರಾರ್ಥಿಸುವ.