11 Feb 2021

ಕೋಟಿ_ಚೆನ್ನಯರು_ಬಿಲ್ಲವರಿಗೆ ಸೀಮಿತವಾದ ನಾಯಕರಲ್ಲ. ಅವರು ತುಳುನಾಡಿನ‌ ಸಮಸ್ತ ಶೋಷಿತ ಜನವಿಭಾಗದ ನಾಯಕರು. ✍🏻#ಮುನೀರ್_ಕಾಟಿಪಳ್ಳ

ಮಂಗಳೂರು ಲಕ ವಿಶೇಷ ಸುದ್ದಿ:
#ಕೋಟಿ_ಚೆನ್ನಯರು_ಬಿಲ್ಲವರಿಗೆ ಸೀಮಿತವಾದ ನಾಯಕರಲ್ಲ. ಅವರು ತುಳುನಾಡಿನ‌ ಸಮಸ್ತ ಶೋಷಿತ ಜನವಿಭಾಗದ ನಾಯಕರು. ಅವರು ಗರಡಿ ಕಟ್ಟಿದ್ದು ಊಳಿಗಮಾನ್ಯ (ಭೂಮಿಯ ಒಡೆತನವನ್ನು ತಮ್ಮ ಮುಷ್ಟಿಯಲ್ಲಿ ಹಿಡಿದಿಟ್ಟು ಇಡೀ ಸಮಾಜವನ್ಜು ಅಮಾನವೀಯವಾಗಿ ನಿಯಂತ್ರಿಸುತ್ತಿದ್ದ ತುಂಡರಸರು, ಪಾಳೇಗಾರರು ರೂಪಿಸಿದ್ದ ವ್ಯವಸ್ಥೆ) ವ್ಯವಸ್ಥೆಯ ವಿರುದ್ದ. ಅಲ್ಲಿ ಅವರು ದಮನಿತ ಜಾತಿಯ ಯುವಕರಿಗೆ ದೈಹಿಕ ಕಸರತ್ತಿನ‌ ಜೊತೆಗೆ ಅನ್ಯಾಯ, ಅಧರ್ಮದ ಮೂಲಕ ತಮ್ಮನ್ನು ಶೋಷಿಸುತ್ತಿದ್ದ ವ್ಯವಸ್ಥೆಯ ವಿರುದ್ದ ಬಂಡಾಯ ಏಳಲು ಪ್ರಚೋದಿಸುತ್ತಿದ್ದರು, ಹಸಿವಿನ ವಿರುದ್ದ, ಅಸಮಾನತೆಯ ವಿರುದ್ದ ತಿಳುವಳಿಕೆ ಮೂಡಿಸುತ್ತಿದ್ದರು. ಅವರಿಗೆ ಅಪ್ಪೆ ದೇಯಿ ಬೈದೆತಿ ಅನುಭವಿಸಿದ ಸಂಕಟ, ತಮ್ಮ ಕುಟುಂಬ, ಸಮುದಾಯ, ಸುತ್ತಲ ಸಮಾಜ ಅನುಭವಿಸಿದ ನೋವು, ಅವಮಾನ, ಸ್ವತಹ ತಾವು ಊರು ಬಿಡಬೇಕಾಗಿ ಬಂದ ಅಸಹಾಯಕ ಸ್ಥಿತಿಯ ಅರಿವಿತ್ತು.

ಕೋಟಿ ಚೆನ್ಮಯರನ್ನು ಈಗ ಅವಮಾನಿಸಿರುವವರ ವಿರುದ್ದ ಹೋರಾಟಕ್ಕಿಳಿದವರಿಗೆ ಇದರ ಅರಿವಿರಬೇಕು. ಇದು ಕೇವಲ‌ ಭಾವುಕ ಪ್ರತಿಕ್ರಿಯೆಗಳಿಗೆ ಸೀಮಿತಗೊಳ್ಳಬಾರದು. ಇಂತಹ ಪ್ರತಿಕ್ರಿಯೆ ಅವಳಿ ಕ್ರಾಂತಿಕಾರಿಗಳ ಆಶಯ, ಆದರ್ಶಗಳನ್ನು ಕುಬ್ಜಗೊಳಿಸುತ್ತದೆ. ಹೋರಾಟ ಬಿಲ್ಲವ ಜಾತಿಗೆ ಸೀಮಿತಗೊಳ್ಳದೆ  ಸಮಸ್ತ ಶೋಷಿತರ, ಬಡವರ, ತುಳಿತಕ್ಕೊಳಗಾದವರ ಹೋರಾಟವಾಗಿ ಹೊರ ಹೊಮ್ಮಬೇಕು. ದೈಹಿಕ‌ ದಾಳಿಗಳ ಮೂಲಕ ದಿಕ್ಕು ತಪ್ಪದಂತೆ ಎಚ್ಚರ ವಹಿಸಬೇಕು. ಹಾಗದರೆ ಅದು ಕೋಟಿ ಚೆನ್ನಯರಿಗೆ ಮಾಡುವ ಅವಮಾನ.  ತುಳುನಾಡಿನ ಆಧುನಿಕ‌ ಕಾಲಘಟ್ಟದ ದುಡಿಯುವ ಜನರ, ಗೇಣಿದಾರ ರೈತರ ಹೋರಾಟಗಳಲ್ಲಿ ಕೋಟಿ ಚೆನ್ನಯರ ಬಲಿದಾನ, ಅವರು ಕಟ್ಟಿದ ಗರಡಿಗಳ ಆಶಯದ ನೆರಳಿದೆ.

ಕೋಟಿ ಚೆನ್ನಯರು ನನ್ನಂತವರಿಗೆ ಗೌರವಾರ್ಹರು ಮಾತ್ರ ಅಲ್ಲ, ಮಾರ್ಗದರ್ಶಕರು, ಸ್ಪೂರ್ತಿದಾಯಕರು. ದೇಯಿ ಬೈದೆತಿಯ ಮಕ್ಕಳಿಗೆ ಮಾಡಿದ ಅವಮಾನ ಅವರಿಗಲ್ಲ ಅದು  ತುಳುನಾಡಿನ‌ ಸರ್ವರಿಗೂ ಮಾಡಿದ ಅವಮಾನ.‌ ಅದರ ವಿರುದ್ದ ನಡೆಯುವ ಹೋರಾಟದಲ್ಲಿ ನಾನೂ ಇದ್ದೇನೆ, ತುಳುನಾಡಿನ ಸರ್ವರೂ ಇರಬೇಕು.🙏🙏

✍🏻#ಮುನೀರ್_ಕಾಟಿಪಳ್ಳ

ಬೃಹತ್ ಪ್ರತಿಭಟನಾ ಮೆರವಣಿಗೆ - ಸಮಾವೇಶ