28 Feb 2021

ಬಡತನವನ್ನು ಮೆಟ್ಟಿ ...ಮೀರಿ ನಿಂತ -ನಿಜ ಸ್ವಾಭಿಮಾನದ ವಿದ್ಯೆ

ಮಂಗಳೂರು ಲಕ ವಿಶೇಷ ಸುದ್ದಿ:

ವಿದ್ಯೆಗೆ ಬಡತನ ಅಡ್ಡ ಆಗಲಾರದು ಎಂದು ತೋರಿಸಿದ ಸಾದಕಿ 🙏🙏🙏

ಧರ್ಮಸ್ಥಳ ಗ್ರಾಮದ ನಾರ್ಯ ಎಂಬ ಪುಟ್ಟ ಹಳ್ಳಿಯಲ್ಲಿ ಕಡುಬಡತನದ ಕುಟುಂಬದಲ್ಲಿ ಹುಟ್ಟಿ ಬೆಳೆದಿರುವ ಚೇತನಾ ಅಸಾಮಾನ್ಯ ಸಾಧನೆ ಮಾಡಿದ್ದಾರೆ. 1 ರಿಂದ 6ನೇ ತರಗತಿವರೆಗಿನ ಪ್ರಾಥಮಿಕ ಶಿಕ್ಷಣವನ್ನು ಪೆರ್ನೆ ಕನ್ನಡ ಮಾಧ್ಯಮ ಶಾಲೆ, ಏಳನೇ ತರಗತಿ ವಿದ್ಯಾಭ್ಯಾಸವನ್ನು ತಮ್ಮ ಊರಾದ ಕನ್ಯಾಡಿ ಸರ್ಕಾರಿ ಶಾಲೆಯಲ್ಲಿ ಓದಿದ್ದಾರೆ. ಪ್ರೌಢ ಶಿಕ್ಷಣವನ್ನು ಧರ್ಮಸ್ಥಳ ಶ್ರೀ. ಧ.ಮಂ. ಸೆಕೆಂಡರಿ ಶಾಲೆ, ಪದವಿ ಪೂರ್ವ ಶಿಕ್ಷಣವನ್ನು ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ.ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ 2016ರಲ್ಲಿ ತಮ್ಮ ಕಾನೂನು ವಿದ್ಯಾಭ್ಯಾಸ ಪೂರ್ಣಗೊಳಿಸಿ, ಬೆಳ್ತಂಗಡಿಯ ವಕೀಲರಾದ ಕೇಶವ ಪಿ. ಬೆಳಾಲು ಅವರ ಕಚೇರಿಯಲ್ಲಿ ವಕೀಲ ವೃತ್ತಿ ಅರಂಭಿಸಿದರು. ಬಳಿಕ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಬಿ. ಎ. ಪಾಟೀಲ್ ಅವರ ಕ್ಲಾರ್ಕ್ ರಿಸರ್ಚ್ ಅಸಿಸ್ಟೆಂಟ್ ಆಗಿ ಸುಮಾರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಒಂದು ವರ್ಷದಿಂದ ನ್ಯಾಯವಾದಿ ಶಿವಪ್ರಸಾದ್ ಶಾಂತನಗೌಡರ್ ಕಚೇರಿಯಲ್ಲಿ ಕಿರಿಯ ವಕೀಲರಾಗಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವೃತ್ತಿ ಜೀವನ ನಡೆಸುತ್ತಿದ್ದರು. ಇದೀಗ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಿವಿಲ್ ನ್ಯಾಯಾಧೀಶ ಹುದ್ದೆಗೆ ಆಯ್ಕೆಯಾಗಿದ್ದಾರೆ.ಮನೆಯಲ್ಲಿ ಆರ್ಥಿಕ ಬಡತನ. ಒಂದು ಹೊತ್ತು ಊಟಕ್ಕಾಗಿ ಪರದಾಡುತ್ತಿದ್ದರು. ತಾನು ಹಸಿದ ಹೊಟ್ಟೆಯಲ್ಲಿ ಕೂತು ತನ್ನ ಮಕ್ಕಳು ವಿದ್ಯಾವಂತರಾಗಿ ಸಮಾಜದಲ್ಲಿ ಎಲ್ಲರೂ ತಲೆ ಎತ್ತಿ ನೋಡುವಂತಾಗಬೇಕು ಎಂದುಕೊಂಡಿದ್ದರು ಆಕೆಯ ತಾಯಿ. ಪಣ ತೊಟ್ಟು ವಿದ್ಯೆಯ ಹಸಿವನ್ನು ನೀಗಿಸಿದ ತನ್ನ ಹೆತ್ತಬ್ಬೆಯ ಕನಸನ್ನು ನನಸಾಗಿಸಿದ ಯುವತಿಯೇ ಚೇತನಾ ನಾರ್ಯ.ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಸಮೀಪದ ನಾರ್ಯದ ರಾಮಣ್ಣ ಪೂಜಾರಿ ಮತ್ತು ಸೀತಾ ದಂಪತಿಯ ಪುತ್ರಿ ಚೇತನಾ. ಇದೀಗ ಸಿವಿಲ್ ನ್ಯಾಯಾಧೀಶೆ ಪರೀಕ್ಷೆ ಬರೆದು ಉತ್ತೀರ್ಣರಾದ ಚೇತನಾ ನಾರ್ಯ ಅವರ ಸಾಧನೆಯೇ ಎಲ್ಲರಿಗೂ ಮಾದರಿ.ರಾಮಣ್ಣ ಪೂಜಾರಿ, ಸೀತಾ ದಂಪತಿಗೆ ನಾಲ್ಕು ಮಕ್ಕಳಲ್ಲಿ ಮೂವರು ಗಂಡುಮಕ್ಕಳು ಹಾಗೂ ಓರ್ವ ಹೆಣ್ಣುಮಗಳು. 4 ಮಕ್ಕಳಲ್ಲಿ ದೊಡ್ಡವ ರೂಪೇಶ್ ವಿಶೇಷ ಚೇತನನಾಗಿದ್ದು, 14 ವರ್ಷ ಬಳಿಕ ನಡೆದಾಡಿದ್ದಾರೆ. ತಂದೆ ಕೂಲಿ, ತಾಯಿ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದರು. ನಾರ್ಯದಲ್ಲಿ ಸಿಮೆಂಟ್ ಸೀಟಿನ ಚಿಕ್ಕ ಮನೆಯಲ್ಲಿ ಇವರ ಬದುಕು. ಅದರೂ ಚೇತನಾ ತಾಯಿ ಮಾತ್ರ ಯಾವುದಕ್ಕೂ ಎದೆಗುಂದದೇ ತಮ್ಮ ಮಕ್ಕಳು ನಮ್ಮಂತೆ ಅವಿದ್ಯಾವಂತರಾಗದೇ ವಿದ್ಯೆಯನ್ನು ಕಲಿತು ಸಮಾಜದಲ್ಲಿ ಎಲ್ಲರೂ ಗುರುತಿಸುವಂತಾಗಬೇಕು ಎಂದು ಪಣ ತೊಟ್ಟಿದ್ದರು. ಮಕ್ಕಳ ವಿದ್ಯಾಭ್ಯಾಸಕ್ಕೆ ರಾತ್ರಿ ಹಗಲು ನಿದ್ದೆಗೆಟ್ಟು ಬೀಡಿ ಕಟ್ಟಿ ಅವರ ಇಚ್ಛೆಯಂತೆ ಶಿಕ್ಷಣ ನೀಡಿದ್ದಾರೆ. ಮಕ್ಕಳನ್ನು ಸುಸಂಸ್ಕೃತ ವಿದ್ಯಾವಂತರನ್ನಾಗಿ ಮಾಡಿದ್ದಾರೆ.
ವರದಿ ಕೃಪೆ FB