ಮಂಗಳೂರು ಲಕ ಸುದ್ದಿ:
*ಶ್ರೀ ನಾರಾಯಣ ಗುರುಗಳ ಹೆಸರನ್ನು ವಿವಾದಿತ ಸ್ಥಳಗಳಿಗೆ ಇಟ್ಟು ಗುರುಗಳ ಹೆಸರು ತತ್ವ ಆದರ್ಶಗಳಿಗೆ ಮಸಿ ಬಳಿದು ಗುರು ಭಕ್ತರ ಭಾವನೆಗಳಿಗೆ ಕುಂದು ಉಂಟು ಮಾಡುವ ಷಡ್ಯಂತ್ರ ವನ್ನು ತೀವ್ರವಾಗಿ ವಿರೋಧಿಸುತ್ತೇವೆ.*
ಸಮುದಾಯದ ಯುವಕರನ್ನು ದಾರಿತಪ್ಪಿಸಿ ಶ್ರೀ ನಾರಾಯಣ ಗುರುಗಳ ಬೋಧನೆ ತತ್ವಕ್ಕೆ ವಿರುದ್ಧವಾಗಿ ಆಕ್ಷೇಪ ಇರುವ ವಿವಾದಿತ ಸ್ಥಳಕ್ಕೆ ಅವರ ಹೆಸರನ್ನು ಸೂಚಿಸಿ ಆ ಮೂಲಕ ವಿಶ್ವಾದ್ಯಂತ ಜನರ ಗೌರವಕ್ಕೆ ಪಾತ್ರವಾಗಿರುವ ವಿಶ್ವ ಗುರು ಶ್ರೀ ನಾರಾಯಣ ಗುರುಗಳ ಹೆಸರನ್ನು ಕೆಡಿಸುವ ಪ್ರಯತ್ನಕ್ಕೆ ನಮ್ಮ ವಿರೋಧವಿದೆ. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಬೋಧಿಸಿದ ಶ್ರೀ ನಾರಾಯಣ ಗುರುಗಳ ಹೆಸರನ್ನು ವಿವಾದವಿಲ್ಲದ ಸ್ಥಳಗಳಿಗೆ ಮಂಗಳೂರಿನಲ್ಲಿ ನೀಡಬೇಕು ಎಂಬುದು ನಮ್ಮ ಆಗ್ರಹ.
ಶ್ರೀ ನಾರಾಯಣ ಗುರುಗಳು ಈ ದೇಶ ಕಂಡ ಅಧ್ಭುತ ದಾರ್ಶನಿಕ, ಚಿಂತಕ, ಅಪ್ಪಟ ಮಾನವತಾವಾದಿ, ಭಾರತೀಯ ಸಮನ್ವಯ ಧಾರ್ಮಿಕ ಪರಂಪರೆಯಲ್ಲಿ ವಿರಳವಾಗಿ ಕಾಣಬಹುದಾದ ಮಹರ್ಷಿಗಳಲ್ಲಿ ಶ್ರೀ ನಾರಾಯಣ ಗುರು ಮುಖ್ಯರಾಗುತ್ತಾರೆ. " ಧಾರ್ಮಿಕ ಸಿದ್ಧಾಂತಗಳು ವಾದಿಸಲಿಕ್ಕೂ ಅಲ್ಲ ವಾದಿಸಿ ಜಯಿಸಲಿಕ್ಕೂ ಅಲ್ಲ, ಅದು ಸರ್ವರ ಸಮನ್ವಯ ಜೀವನಕ್ಕೆ ಜೀವಾಳವಾಗ ಬೇಕು" ಎಂದು ಸಾರಿದ ಗುರು ತಾನು ಕಂಡುಕೊಂಡ ಸತ್ಯ ವನ್ನು ಆಚರಿಸಿ ತೋರಿದವರು. "ಮನುಷ್ಯನನ್ನು ಒಳ್ಳೆಯ ಮನುಷ್ಯ ನನ್ನಾಗಿ ಮಾಡುವುದೇ ಎಲ್ಲಾ ಧರ್ಮಗಳ ಉದ್ಧೇಶಗಳು. ಮತ ಯಾವುದಾದರೇನು ಮನುಷ್ಯ ಒಳ್ಳೆಯವನಾದರೆ ಸಾಕು" ಎನ್ನುವ ಶ್ರೀ ನಾರಾಯಣ ಗುರುಗಳ ಈ ಸರಳ ಸಂದೇಶವೇ ಮಾನವ ಜನಾಂಗಕ್ಕೆ ದಾರಿ ದೀಪ.
*ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡಿದ ಗುರುಗಳು*
ತಾಯಿಯ ಒಡನಾಟದಲ್ಲೇ ವ್ಯಕ್ತಿತ್ವ ವನ್ನು ರೂಪಿಸಿಕೊಳ್ಳುವ ಮಗುವೇ ಭವಿಷ್ಯದ ಸಮಾಜವಾಗುವುದು. ಮಗುವಿನಲ್ಲಿ ಉತ್ತಮ ಸಂಸ್ಕಾರ ಗಳನ್ನು ರೂಡಿಸಬೇಕಾದರೆ ತಾಯಿ ವಿದ್ಯಾವಂತೆಯೂ, ಪ್ರಜ್ಞಾವಂತೆಯೂ, ಸುಸಂಸ್ಕೃತಳೂ,ಆಗಬೇಕು. ಸಮಾಜದ ಅಭಿವೃದ್ಧಿಯ ಮೂಲದಲ್ಲಿ ತಾಯಿಯೇ ಪ್ರಧಾನಳಾಗಿ ಕಾರ್ಯನಿರ್ವಹಿಸುವುದರಿಂದ ಆಕೆಗೆ ಉತ್ತಮ ಶಿಕ್ಷಣ ಅನಿವಾರ್ಯ ತೆಯ ಅಗತ್ಯವಿದೆ. ಇದು ಶ್ರೀ ನಾರಾಯಣ ಗುರುಗಳ ಶಿಕ್ಷಣ ಕ್ರಾಂತಿಯ ತಲಹದಿಯಾಗಿತ್ತು.
ಶ್ರೀ ನಾರಾಯಣ ಗುರುಗಳು ಜಾತಿ, ಮತ, ಧರ್ಮಗಳ ತಾರತಮ್ಯ ಗಳನ್ನು ಮೀರಿ, ಸರ್ವರಲ್ಲೂ ಸಮಭಾವದಿಂದ ಜೀವನವಿಡೀ ಅವರು ನಡೆದುಕೊಂಡ ಅಸಾಧಾರಣ ಜೀವನ ಕ್ರಮ, ಹಾಗೂ ಸಂಘರ್ಷರಹಿತರಾಗಿ ಅವರು ಮಾಡಿದ ಸಾಮಾಜಿಕ ಕ್ರಾಂತಿಗಳು ಅಪೂರ್ವವಾದ ವುಗಳು.
ಮಂಗಳೂರು ನಗರ ಪಾಲಿಕೆ ಮತ್ತು ಕರ್ನಾಟಕ ಸರಕಾರದಲ್ಲಿ ಶ್ರೀ ನಾರಾಯಣ ಗುರುಗಳ ಭಕ್ತಾಭಿಮಾನಿಗಳು ವಿನಂತಿ ಮಾಡುವುದೇನೆಂದರೆ ಶ್ರೀ ನಾರಾಯಣ ಗುರುಗಳ ಹೆಸರನ್ನು ಜಿಲ್ಲಾ ಆಸ್ಪತ್ರೆಗೆ ಇಟ್ಟು ಉತ್ತಮ ಆರೋಗ್ಯ ಸೇವೆಯನ್ನು ಕೊಡಬಹುದು, ಮಂಗಳೂರಿನಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜಿಗೆ ಶ್ರೀ ನಾರಾಯಣ ಗುರುಗಳ ಹೆಸರನ್ನು ಇಟ್ಟು ಶ್ರೀ ನಾರಾಯಣ ಗುರು ತತ್ವ ವನ್ನು ಎಲ್ಲರೂ ತಿಳಿದು ಕೊಳ್ಳುವಂತೆ ಮಾಡಬಹುದು. ವಿವಾದವಿಲ್ಲದ ರಸ್ತೆ ಅಥವ ವೃತ್ತ ಕ್ಕೆ ಶ್ರೀ ನಾರಾಯಣ ಗುರುಗಳ ಹೆಸರು ಇಡಬಹುದು. ಆದರೆ ಆಕ್ಷೇಪ ಇರುವ ಮನನೋಯಿಸಿ ವಿವಾದ ಇರುವ ಪ್ರದೇಶಕ್ಕೆ ಶ್ರೀ ನಾರಾಯಣ ಗುರುಗಳ ಹೆಸರು ಇಡುವುದು ಬೇಡ ಯಾಕೆಂದರೆ ಶ್ರೀ ನಾರಾಯಣ ಗುರುಗಳು ಕೇವಲ ವ್ಯಕ್ತಿಯಲ್ಲ ಪರಂ ಬ್ರಹ್ಮ ಸ್ವರೂಪಿಯಾಗಿ ಮಾನವ ಜನಾಂಗ ವನ್ನು ಉದ್ಧಾರ ಮಾಡಲು ಬಂದ ದೇವರ ಅವತಾರ. ಆದುದರಿಂದ ಎಲ್ಲರ ಸರ್ವ ಸಮ್ಮತಿ ಯಂತೆ ಶ್ರೀ ನಾರಾಯಣ ಗುರುಗಳ ಹೆಸರನ್ನು ಇಟ್ಟು ಶ್ರೀ ನಾರಾಯಣ ಗುರು ತತ್ವ ಪ್ರಚಾರಕ್ಕೆ ಪೂರಕವಾಗಿ ಕೆಲಸ ಮಾಡ ಬೇಕೆಂದು ವಿನಂತಿ.
✍️ ರಾಜೇಂದ್ರ ಚಿಲಿಂಬಿ