17 Jul 2020

ಬಹುಮುಖ ಪ್ರತಿಭೆ -ಕುಮಾರಿ ಶ್ರೀರಕ್ಷಾ ಎಸ್ ಎಚ್ ಪೂಜಾರಿ ಕೊಣಾಜೆ

ನಮ್ಮ ಸಾಧನೆಯ ಬರಹವನ್ನು ನಾವೇ ಬರೆದುಕೊಂಡು ಜಗತ್ತಿಗೆ ತೋರಿಸುವುದು ಸಾಧನೆಯಲ್ಲ. ಜಗತ್ತು ನಮ್ಮ ಬಗ್ಗೆ ಅಂದವಾಗಿ ಬರೆದಾಗ ನಾವು ಅದನ್ನು ಓದಿ ಸಂಭ್ರಮಪಡಬೇಕು. ಅದು ನಿಜವಾದ ಸಾಧನೆ.ಅಂತಹ ಸಾಧನೆಯ ಹಾದಿಯತ್ತ ಹೆಜ್ಜೆಯನ್ನು ಇಟ್ಟಿರುವ ಬಹುಮುಖ ಪ್ರತಿಭೆ ಶ್ರೀರಕ್ಷಾ ಎಸ್ ಎಚ್ ಪೂಜಾರಿ ಕೊಣಾಜೆ ಇವರ ಸಾಧನಾ ಪಯಣದ ಮೈಲುಗಲ್ಲಿನಲ್ಲಿ  ಪರಿಚಯವೆಂಬ ಮೊದಲ ಪದಗಳನ್ನು ನನ್ನ ಲೇಖನಿಯಿಂದ ಬರೆಯುತ್ತಿರುವೆ.
✍️ಬರಹ :ರೇಣುಕಾ ಕಣಿಯೂರು 
ಸಾಧನೆ ಎಂಬ ಪದ ಸರಳವಾಗಿದ್ದರೂ, ಅದು ಸಾವಿರಾರು ಕಷ್ಟಗಳ ಸಂಪದ. ಆದರೆ ಸೃಷ್ಟಿಸಿದ ಸಾಧನೆ ಮುಂದೊಂದು ದಿನ ಇತಿಹಾಸ ಸೃಷ್ಟಿಸದೆ ಇರದು.ಒಂದು ರಂಗದಲ್ಲಿ ಸಾಧನೆಗೈಯಲು  ಸಮಯವೇ ಇಲ್ಲವೆಂದು  ಕಷ್ಟಪಡುತ್ತಿರುವವರ ಮಧ್ಯೆ ಶ್ರೀರಕ್ಷಾ ಎಸ್ ಎಚ್ ಪೂಜಾರಿ ಕೊಣಾಜೆ ವಿವಿಧ ಕ್ಷೇತ್ರಗಳಲ್ಲಿ ಸೈ ಎನಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.  ಇವರು  ತನ್ನ ಹೆಸರ ಛಾಯೆ ಬೀರದ ಕ್ಷೇತ್ರಗಳಿಲ್ಲ. ಸಾಧನೆಯ ಕಿರೀಟ ಬೇಕೆಂಬ ಛಲವೊಂದಿದ್ದರೆ ಎಲ್ಲವೂ ಸಾಧ್ಯವೆಂದು ನಿರೂಪಿಸಿದ್ದಾರೆ.  ಹರೀಶ್ ಪೂಜಾರಿ ಮತ್ತು ಸುರೇಖ ದಂಪತಿಗಳ ಮಗಳಾದ ಇವರು  ವಿಶ್ವಮಂಗಳ ಆಂಗ್ಲ ಮಾಧ್ಯಮ ಶಾಲೆ ಕೊಣಾಜೆಯಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ .  ಹೆಣ್ಣು ಜಗ ಬೆಳಗೋ ಜೀವ. ಎಲ್ಲವನ್ನೂ ತನ್ನೊಳಗೆ ಹುದುಗಿಟ್ಟುಕೊಂಡವಳು. ಇವರಲ್ಲಿ  ಹುದುಗಿದ್ದ ಪ್ರತಿಭೆಗೆ ಹೆತ್ತವರ, ಗುರುಗಳ ಪ್ರೋತ್ಸಾಹದ ಸಿಂಚನವಿದೆ, ಹಾಗಾಗಿ ಇವರಲ್ಲಿ   ಸಾಧಿಸುವ ಛಲ ಇಮ್ಮಡಿಗೊಂಡಿದೆ.  ಇನ್ನು ಇವರ ಪ್ರತಿಭಾ ಪುಸ್ತಕವನ್ನು ತಿರುವಿ ಹಾಕಿದಾಗ ಅಲ್ಲಿರುವುದು ಕೇವಲ ಒಂದು ಕ್ಷೇತ್ರದ ಸಾಧನೆಯ ಪುಟಗಳಲ್ಲ.ಶಾಸ್ತ್ರೀಯ ಸಂಗೀತ, ಭರತನಾಟ್ಯ, ರಂಗಕಲೆ, ಕ್ರೀಡೆ, ಕಲೆ ಹೀಗೆ ಹತ್ತು ಹಲವಾರು ಸಾಧನೆಯ ಪುಟಗಳಿವೆ.ಈಕೆ ಸಂಗೀತ ಗುರು ಶ್ರೀಯುತ ವೆಂಕಟಕೃಷ್ಣ ಭಟ್ ಇವರ ಶಿಷ್ಯೆಯಾಗಿದ್ದು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಜೂನಿಯರ್ ಗ್ರೇಡ್ ಪರೀಕ್ಷೆಯನ್ನು 2018-20ನೇ ಸಾಲಿನಲ್ಲಿ ಪ್ರಥಮ ಶ್ರೇಣಿಯಲ್ಲಿ  ತೇರ್ಗಡೆಗೊಂಡಿದ್ದಾರೆ. ಇವರ ಸಾಧನೆಗೆ ಗರಿ ಎಂಬಂತೆ ಇತ್ತೀಚೆಗೆ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ ಲೋಕಾರ್ಪಣೆಗೊಂಡ ಬ್ರಹ್ಮ ಶ್ರೀ ನಾರಾಯಣ ಗುರುಗಳ ಭಕ್ತಿಗೀತೆಯಲ್ಲಿ ಗಾಯಕಿಯಾಗಿ ಹಾಡಿದ ಹಾಡು  ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ  ಇವರು ವಿವಿಧ ಸಂಗೀತ ಸ್ಪರ್ದೆಗಳಲ್ಲಿ ಅನೇಕ ಬಹುಮಾನಗಳನ್ನು ಪಡೆದಿರುತ್ತಾರೆ.   
ನೃತ್ಯಲಹರಿ ನಾಟ್ಯಾಲಯ ಪಜೀರು ಇದರ ನೃತ್ಯಗುರು  ಶ್ರೀಮತಿ ರೇಷ್ಮಾ ನಿರ್ಮಲ್ ಭಟ್  ಇವರಿಂದ ಭರತನಾಟ್ಯ ವಿದ್ಯೆಯನ್ನು ಅಭ್ಯಾಸ ಮಾಡುತ್ತಿದ್ದಾರೆ.  ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿರುವ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯನ್ನು 2019-20 ನೇ ಸಾಲಿನಲ್ಲಿ  ವಿಶಿಷ್ಟ ಶ್ರೇಣಿಯೊಂದಿಗೆ ಉತ್ತೀರ್ಣರಾಗಿರುತ್ತಾರೆ. ತನ್ನ ನೃತ್ಯಗುರುಗಳ  ತಂಡದೊಂದಿಗೆ ಸುಮಾರು ಐವತ್ತಕ್ಕೂ  ಹೆಚ್ಚು ರಾಜ್ಯ, ರಾಷ್ಟ್ರ ಮಟ್ಟದ  ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿರುತ್ತಾರೆ.  ಅನೇಕ ವೇದಿಕೆಗಳಲ್ಲಿ ಏಕವ್ಯಕ್ತಿ ಪ್ರದರ್ಶನವನ್ನು ನೀಡಿರುತ್ತಾರೆ. ವಿಶ್ವ ಪ್ರಸಿದ್ಧ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾ ಕಾರ್ಯಕ್ರಮದಲ್ಲಿ ನಿರಂತರವಾಗಿ 3 ವರ್ಷಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೀಡಿರುತ್ತಾರೆ. ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಅಬ್ಬಕ್ಕೋತ್ಸವ ಕಾರ್ಯಕ್ರಮದಲ್ಲಿ ತನ್ನ ನೃತ್ಯ ಗುರುಗಳ ತಂಡದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ನೀಡಿರುತ್ತಾರೆ. ಅಲ್ಲದೆ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಂದಾರ ರಾಮಾಯಣ ನೃತ್ಯ ರೂಪಕದಲ್ಲಿ ಕೂಡ  ಅಭಿನಯಿಸಿದ್ದರು. 2019-20 ನೇ ಸಾಲಿನಲ್ಲಿ ನಡೆದ ಶಿವಗಿರಿ ಮಠ ವರ್ಕಳ ಕೇರಳ ಇಲ್ಲಿ ನಡೆದ ನಾರಾಯಣ ಗುರುಗಳ ಅರಿವಿನ  ತೀರ್ಥಾಟನೆಯ ಸಾಂಸ್ಕೃತಿಕ ವೇದಿಕೆಯಲ್ಲಿ ಇವರು ತನ್ನ ನೃತ್ಯಗುರುಗಳ ತಂಡದೊಂದಿಗೆ ಕಾರ್ಯಕ್ರಮ ನೀಡಿ ಅಪಾರ ಜನಮನ್ನಣೆಯನ್ನು ಗಳಿಸಿರುತ್ತಾರೆ.
ಭಾರತ್ ಸ್ಕೌಟ್ & ಗೈಡ್ಸ್ ಸಂಸ್ಥೆಯವರು ನಡೆಸುವ ಗೈಡ್ಸ್ ನಲ್ಲಿ ರಾಜ್ಯ ಪುರಸ್ಕಾರ ಪರೀಕ್ಷೆಯನ್ನು ತೇರ್ಗಡೆಗೊಂಡಿರುತ್ತಾರೆ. ಅಲ್ಲದೆ ಕ್ರೀಡಾ ಕ್ಷೇತ್ರದಲ್ಲಿಯೂ ವಾಲಿಬಾಲ್, ತ್ರೋಬಾಲ್, ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದು ಶಟಲ್ ಬ್ಯಾಡ್ಮಿಂಟನ್ ಆಟದಲ್ಲಿ  2019-20ನೇ ಸಾಲಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ನಡೆಸಿರುವ  14 ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ್ದು ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ.ಪರಿಸರದ ಬಗ್ಗೆ ಕಾಳಜಿ ಹೊಂದಿರುವ ಈಕೆ Waste glass bottles ಗಳನ್ನು ರಸ್ತೆ ಬದಿಯಲ್ಲಿ ಎಸೆದಿರುವುದನ್ನು ಹೆಕ್ಕಿ ತಂದು ಸ್ವಚ್ಛಗೊಳಿಸಿ ಅದಕ್ಕೆ ಕಲೆಯ ರೂಪವನ್ನು ತುಂಬಿ ಕಸದಿಂದ ರಸ ಮಾಡುವ ಹವ್ಯಾಸವನ್ನು ರೂಡಿಸಿಕೊಂಡಿದ್ದಾರೆ.
 ಹರೆಯದ ಕನಸಿನ ಕಲ್ಪನೆಗಿಂತ ಮರೆಯಾದ ನಂತರವೂ ಹೆಸರುಳಿಸುವ ಸಾಧನೆ ಮಾಡಲು ಹೊರಟಿರುವ ನಿಮ್ಮ ಸಾಧನೆಯ ದ್ರಷ್ಟಿ  ಮುಗಿಲ ಬಾಗಿಲ ದಾಟಿ ದಿಗಂತದವರೆಗೆ ಇರಲಿ.ನಿಮ್ಮ ಹೆಸರಿಗೆ ಕಲಾಮಾತೆ ಸರಸ್ವತಿ, ಗುರು -ಹಿರಿಯರ ಆಶೀರ್ವಾದದ, ಕಿರಿಯರ ಹಾರೈಕೆಗಳ  ಶ್ರೀ ರಕ್ಷೆ ಸದಾ ಇರಲಿ.  ನಿಮ್ಮ ಸಾಧನೆಯ ಹಾದಿಗೆ ನಾ ಬರೆದ ಮೊದಲ ಪರಿಚಯದ ಈ  ಮೈಲಿಗಲ್ಲು, ಮುಂದೊಂದು ದಿನ ಜನಮನವೆಲ್ಲ ಸೇರಿ ಬರೆವ ಸಾಧಕಿ ಎಂಬ ಬರಹದ ಮೈಲುಗಲ್ಲಿಗೆ ಮುನ್ನುಡಿಯಾಗಲಿ, ಅದನ್ನು ಓದಿ ಸಂಭ್ರಮಿಸುವ ಮನ ನಿಮ್ಮದಾಗಲಿ  ಎಂಬ ಆಶಯದೊಂದಿಗೆ ಬಿಡಿ ಬಿಡಿಯಾದ  ಅಕ್ಷರಸುಮಗಳನ್ನು ಹಾರೈಕೆಯ ಸುಂದರ ಪದಗುಚ್ಛವನ್ನಾಗಿಸಿ ನಿಮ್ಮ ಜೀವನ ಪಯಣಕ್ಕೆ ಅರ್ಪಿಸುತ್ತಿದ್ದೇನೆ. 
       ಶುಭವಾಗಲಿ....

No comments:

Post a Comment